ಕೋವಿಡ್ – 19 ಪರಿಣಾಮ : ವಿದ್ಯಾರ್ಥಿಗಳ ಶೈಕ್ಷಣಿಕ ಹಾದಿ ಅತಂತ್ರ

ಬರಹ : ಸಿದ್ದೀಕ್ ಜಾರಿಗೆಬೈಲು

ಕೋವಿಡ್ – 19 ಪರಿಣಾಮವಾಗಿ ಮಾರ್ಚ್ ತಿಂಗಳ ಬಳಿಕ ಮುಚ್ಚಿದ ಶಾಲೆಗಳನ್ನು ಸರ್ಕಾರವೂ ಸೂಕ್ತ ವ್ಯವಸ್ಥೆಯೊಂದಿಗೆ ತೆರೆಯುವ ವಿಚಾರವಾಗಿ ಅಂತಿಮ‌ ತೀರ್ಮಾನ ಕೈಗೊಳ್ಳದೇ ಇರುವುದರಿಂದ, ಮಕ್ಕಳು‌ ಮನೆಯಲ್ಲಿ ಮತ್ತು ಶಿಕ್ಷಕರು ಶಾಲೆಯಲ್ಲಿ ಎನ್ನುವ ಪರಿಸ್ಥಿತಿ ಎದುರಾಗಿದೆ. ಮಾರ್ಚ್ ತಿಂಗಳಿನಿಂದ ವಿದ್ಯಾರ್ಥಿಗಳಲ್ಲಿ ಮತ್ತು ಪೋಷಕರಲ್ಲಿ ಒಂದು ರೀತಿಯ ಗೊಂದಲದ ಮನಸ್ಥಿತಿಯೇ ಉಂಟಾಗಿರುವುದು ಸುಳ್ಳಲ್ಲ.

ದೇಶದಲ್ಲಿ ಈ ಮೊದಲೇ ಅನಕ್ಷರಸ್ಥರು ಹೆಚ್ಚುತ್ತಿರವಾಗ ಈ ಕೊರೋನಾ ಮಹಾಮಾರಿ ಶೈಕ್ಷಣಿಕ ಕ್ಷೇತ್ರದಲ್ಲಿ ಊಹಿಸಲೂ ಅಸಾಧ್ಯವಾದ ರೀತಿಯ ಅವ್ಯವಸ್ಥೆಗೆ ಕಾರಣವಾಗಿದೆ.
ಕೋವಿಡ್ -19 ನೊಂದಿಗೆ ಹೊಂದಿಕೊಂಡು ಎಲ್ಲಾ ಕ್ಷೇತ್ರಗಳೂ ತಮ್ಮ ಕಾರ್ಯಚಟುವಟಿಕೆಯನ್ನು ಆರಂಭಿಸುವಾಗ, ಶಿಕ್ಷಣ ಕ್ಷೇತ್ರದ ಯೋಜನೆಗಳು ಮಾತ್ರ ಇನ್ನೂ ಮೊದಲಿನಂತೆ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂಬುವುದು ಖೇದಕರದ ಸಂಗತಿ.
ದೇಶದ ಆರ್ಥಿಕ ಪರಿಸ್ಥಿತಿಯು ಎಲ್ಲರನ್ನೂ ಚಿಂತೆಗೊಳಗಾಗಿಸಿದ್ದು ಒಂದು ಕಡೆಯಾದರೆ, ದೇಶದ ಭಾವಿ ಪ್ರಜೆಗಳ ಶಿಕ್ಷಣದ ವ್ಯವಸ್ಥೆಯ ಸಬಲೀಕರಣವು ಸರ್ಕಾರಕ್ಕೆ ಸವಾಲಾಗಿ ಬಿಟ್ಟಿದೆ.

ಶಾಲೆಗಳನ್ನು ತೆರೆಯದಿದ್ದರೆ, ಮಕ್ಕಳನ್ನು ಮನೆಯಲ್ಲಿ ಸಂಭಾಳಿಸುವುದಾದರೂ ಹೇಗೆ ? ಇನ್ನೂ ಶಾಲೆಗಳನ್ನು ಆರಂಭಿಸಿದರೆ ಹೆಚ್ಚುತ್ತಿರುವ ಕೊರೊನಾ ಆತಂಕದಿಂದ ಮಕ್ಕಳನ್ನು ಕಳುಹಿಸುವುದಾದರೂ ಹೇಗೆ ? ಎಂಬ ವಿಚಾರವಾಗಿ ದ್ವಂದ್ವ ಸ್ಥಿತಿಯಲ್ಲಿ ಪೋಷಕರಿದ್ದಾರೆ.

ಇನ್ನೂ, ಮಕ್ಕಳು ಈ ಸಂದಿಗ್ಧ ಕಾಲದಲ್ಲಿಯೂ ಶಿಕ್ಷಣದಿಂದ ವಂಚಿತರಾಗಬಾರದು, ಎಂಬ ಉದ್ದೇಶದಲ್ಲಿ ಆರಂಭಿಸಿದ ಆನ್‌ಲೈನ್ ತರಗತಿಗಳು ನಡೆಯುತ್ತಿದ್ದರೂ, ಎಷ್ಟು ಮಕ್ಕಳು ಹಾಜರಾಗುತ್ತಿದ್ದಾರೆ ?? ಎಂಬುವುದು ಅವಲೋಕಿಸುವುದು ಅತ್ಯಗತ್ಯ. ಈ ಡಿಜಿಟಲ್ ಶಿಕ್ಷಣ ಪದ್ಧತಿಯಿಂದಾಗಿ ಶಿಕ್ಷಣ ಸಿಗದೇ ವಂಚಿತರಾಗುವ ಗ್ರಾಮೀಣ ಪ್ರದೇಶದ ಮಕ್ಕಳಿಗಾಗಿ ಆರಂಭಿಸಿದ “ವಿದ್ಯಾಗಮ” ಯೋಜನೆಯೂ ಯಶಸ್ವಿಯಾಗದೇ, ಪಾಠ ಮಾಡಲು ಹಳ್ಳಿಗಳ ಮನೆ ಬಾಗಿಲಿಗೆ ತೆರಳಿದ ಶಿಕ್ಷಕರಿಗೂ ಕೊರೋನಾ ಸೋಂಕು ತಗುಲಿದ್ದು ಆತಂಕಕ್ಕೀಡುಮಾಡಿದೆ..!

ಆದರೆ, ಇವೆಲ್ಲಾ ಗೊಂದಲಗಳು ಮತ್ತು ಆತಂಕಗಳಿಂದ ದೂರವಾಗಿ ಮಕ್ಕಳು ತಮ್ಮ ಮನರಂಜನೆಗಾಗಿ ಆಟಗಳಲ್ಲಿ ಮತ್ತು ಮೊಬೈಲ್‌, ಸಾಮಾಜಿಕ ಜಾಲತಾಣಗಳಲ್ಲಿ ಸಮಯ ವ್ಯರ್ಥಗೊಳಿಸುತ್ತಿದ್ದಾರೆ.
ಕೊರೋನಾ ಕಾರಣದಿಂದ, ಡಿಜಿಟಲ್ ಪದ್ಧತಿಯ ಶಿಕ್ಷಣವು ಅದೆಷ್ಟೋ ಮಕ್ಕಳಿಗೆ ಬಲುದೊಡ್ಡ ಸವಾಲಾಗಿ ಬಿಟ್ಟಿದೆ. ದಿನಗೂಲಿ‌ ಕೆಲಸಕ್ಕೆ ಹೋಗುವ ಪಾಲಕರಿಗೆ ಸ್ಮಾರ್ಟ್ ಫೋನ್ ಖರೀದಿಸಲು ಸಾಧ್ಯವಾಗದೇ ಇರುವುದು, ನೆಟ್‌ವರ್ಕ್ ಸಮಸ್ಯೆ, ನಾಲ್ಕು ಮಕ್ಕಳಿರುವ ಒಂದು ಮನೆಯಲ್ಲಿ ಒಂದೇ ಸ್ಮಾರ್ಟ್ ಫೋನ್, ಹೀಗೆ ಹತ್ತಲವಾರು ಸವಾಲುಗಳು ಈ ಪದ್ಧತಿಯಲ್ಲಿ ಎದುರಾಗಿದೆ.

ಇವೆಲ್ಲಾ ಸಮಸ್ಯೆಗಳ ಬಗ್ಗೆ ಚಿಂತೆಯೇ ಮಾಡದೇ, ಅತ್ತ ಶಾಲಾ-ಕಾಲೇಜುಗಳ ಆರಂಭದ ನಿರೀಕ್ಷೆಯೂ ಇಲ್ಲದೆ, ವಿದ್ಯಾರ್ಥಿಗಳು ಮನೆಯ ಆರ್ಥಿಕ ಪರಿಸ್ಥಿತಿ ಕಂಡು ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ, ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಕೆಲವರಂತೂ ಭವಿಷ್ಯದಲ್ಲಿ ಶಿಕ್ಷಣ ಪಡೆಯುವ ಭರವಸೆಯನ್ನೇ ಕಳೆದುಕೊಂಡು, ಉದ್ಯೋಗಕ್ಕಾಗಿ ಬೆಂಗಳೂರಿನತ್ತ ಮುಖಮಾಡಿರುತ್ತಾರೆ. ವಾಣಿಜ್ಯ ಕ್ಷೇತ್ರದಲ್ಲಿನ ಆರ್ಥಿಕ ಬಿಕ್ಕಟ್ಟು ಮತ್ತು ಕೊರೋನಾ ಪರಿಣಾಮದಿಂದ ಪ್ರಸ್ತುತ ದಿನಗಳಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಗಳು ವಿದ್ಯಾರ್ಥಿಗಳನ್ನು ಭವಿಷ್ಯದಲ್ಲಿ ಉದ್ಯೋಗ ಸಿಗುವ ಭರವಸೆಯನ್ನೇ ಶೂನ್ಯವಾಗಿಸಿದೆ.!

ಯುನೆಸ್ಕೋ ವರದಿಯ ಪ್ರಕಾರ ಕೋವಿಡ್ ಪರಿಣಾಮದಿಂದ, ಜಗತ್ತಿನ ವಿದ್ಯಾರ್ಥಿ ಸಮುದಾಯದ ಪೈಕಿ ಶೇ.91 ರಷ್ಟು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಾರೆ ಮತ್ತು ಅವರ ಭವಿಷ್ಯದ ಮೇಲೆ ಭಾರೀ ಪರಿಣಾಮ ಉಂಟು ಮಾಡುತ್ತದೆ.

ಶಾಲೆಗಳು ತೆರೆಯದೇ ಇರುವುದರಿಂದ, ಶಿಕ್ಷಕರ & ವಿದ್ಯಾರ್ಥಿಗಳ ನಡುವಿನ ಮುಖಾಮುಖಿ ಭೋದನಾ ಸಂವಹನವು ಸಾಧ್ಯವಾಗುತ್ತಿಲ್ಲ. ಪ್ರೈಮರಿ ಮಕ್ಕಳು ಇಂಟರ್‌ನೆಟ್ ಗೀಳು ಅಂಟಿಸಿಕೊಳ್ಳುವುದು, ಹಲವಾರು ವಿದ್ಯಾರ್ಥಿಗಳು ಅತ್ತ ಶಿಕ್ಷಣವೂ ಇಲ್ಲದೇ, ಇತ್ತ ಉದ್ಯೋಗ ಸುರಕ್ಷತೆ ಇಲ್ಲದೇ ಮಾನಸಿಕ ಖಿನ್ನತೆಗೊಳಗಾಗಿರುವುದು ಆತಂಕದ ವಿಚಾರವೇ ಸರಿ.
ಅಷ್ಟೇ ಅಲ್ಲದೇ, ಪದವಿ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿದ್ದ ವಿದ್ಯಾರ್ಥಿಗಳಿಗೆ ಈ ಕೊರೊನಾ‌ ಕಾಲ ನಿರಾಸೆ ಉಂಟುಮಾಡಿದೆ.

ಶಿಕ್ಷಕರ ವಿಚಾರಕ್ಕೆ ಬಂದಾಗ, ಕೊರೋನಾ ಕಾಲವು ಶಿಕ್ಷಕರಿಗೂ ಮುಳುವಾಗಿದೆ. ಅದೆಷ್ಟೋ ಖಾಸಗೀ ಸಂಸ್ಥೆಗಳ & ಅನುದಾನ ರಹಿತ ಶಾಲೆಯ ಶಿಕ್ಷಕರು ಆನ್‌ಲೈನ್ ಭೋದನೆ ಮಾಡುತ್ತಿದ್ದು, ವೇತನ ಸಿಗದೇ ಬದುಕುವ ದಾರಿಯಂತೂ ಶೋಚಣೀಯವಾಗಿದೆ.

ಸಾಮಾನ್ಯವಾಗಿ ಮುಂದಿನ ವಿದ್ಯಾಭ್ಯಾಸದ ತೀರ್ಮಾನಕ್ಕೆ ಸಕಾಲವಾದ ಎಪ್ರಿಲ್- ಮೇ-ಜೂನ್ ತಿಂಗಳು ಲಾಕ್‌ಡೌನ್ ನಲ್ಲಿಯೇ ಕಳೆದದ್ದು ಅದೆಷ್ಟೋ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯವನ್ನೇ ಕಡಿಮೆಗೊಳಿಸಿದೆ. ಈಗಾಗಲೇ ಸರ್ಕಾರಿ ಶಾಲೆಗಳಿಗೆ ದಾಖಲಾತಿ ಮಾಡಿಕೊಂಡು ಅರ್ಧದಷ್ಟು ವಿದ್ಯಾರ್ಥಿಗಳಿಗೆ ಸಮವಸ್ತ್ರ ಸಿಗದೇ, ನಿರೀಕ್ಷೆಯಲ್ಲಿಯೇ ದಿನ ದೂಡುವಂತಾಗಿದೆ.

“ಈ ವರ್ಷ ಪ್ರಾಥಮಿಕ ಶಾಲೆ ಬೇಡವೇ ಬೇಡ, ಆನ್‌ಲೈನ್ ತರಗತಿಗಳು ಸೂಕ್ತ ವ್ಯವಸ್ಥೆಯಲ್ಲ, ಶಾಲೆಗಳು ಆರಂಭವಾದರೂ ಸಾಮಜಿಕ ಅಂತರದ ಸ್ಪಷ್ಟ ಪರಿಕಲ್ಪನೆ ಪುಟ್ಟ ಮಕ್ಕಳಿಗೆ ಗೊತ್ತಿರುವುದಿಲ್ಲ ಹಾಗಾಗಿ 2020-21 ಅವಧಿಯನ್ನು ಶೂನ್ಯ ಶೈಕ್ಷಣಿಕ ವರ್ಷವೆಂದು ಘೋಷಣೆ ಮಾಡಿಬಿಡಿ” ಎಂದು ರಾಜ್ಯದ ಬಹುತೇಕ ಮಕ್ಕಳ ಹೆತ್ತವರು, ಶಿಕ್ಷಕರು, ವಿದ್ಯಾರ್ಥಿಗಳು ಅಭಿಪ್ರಾಯಪಟ್ಟಿರುವುದು ವರದಿಯಾಗಿದೆ.

ಶಿಕ್ಷಣ ಸಂಸ್ಥೆಗಳು ಆರಂಭವಾಗದಿರುವ ಪರಿಣಾಮವಾಗಿ, ಮಕ್ಕಳು ಬಾಲ ಕಾರ್ಮಿಕರಾಗುತ್ತಿದ್ದಾರೆ, ಕೆಲವೊಂದು ಗ್ರಾಮೀಣ ಪ್ರದೇಶದಲ್ಲಿ ಬಾಲ್ಯ ವಿವಾಹಕ್ಕೂ ಹೇತುವಾಗಿಬಿಟ್ಟಿದೆ. ಅಲ್ಲದೇ ಮಕ್ಕಳ ಜ್ಞಾನಾರ್ಜನೆ ಕಡಿಮೆಗೊಂಡು ಶೈಕ್ಷಣಿಕವಾಗಿ ಅವರ ಹಾದಿಯೇ ತಪ್ಪುತ್ತಿದೆ.

ಸರಕಾರ, ಶಿಕ್ಷಣ ಇಲಾಖೆಯ ದ್ವಿಮುಖ ನೀತಿ, ದಿನದಿನಕ್ಕೆ ಬದಲಾಗುವ ಮಾರ್ಗಸೂಚಿಗಳಿಂದ ಹಲವು ಗೊಂದಲಗಳು ಸೃಷ್ಟಿಯಾಗಿವೆ. ಪರಿಣಾಮ ಲೆಕ್ಕಿಸದೇ, ಪರಾಮರ್ಶೆಗೊಳಪಡಿಸದೇ ಪ್ರಕಟಿಸುವ ನಿರ್ಧಾರಗಳು ವಿದ್ಯಾರ್ಥಿಗಳನ್ನು & ಪಾಲಕರನ್ನು ಗೊಂದಲಕ್ಕೆ ಸಿಲುಕಿಸಿವೆ.

ಹೀಗೆ, ಕೊರೋನಾ ವೈರಸ್‌ನಿಂದ ಇಡೀ ಜಗತ್ತು ಅತೀ ದೊಡ್ಡ ಶೈಕ್ಷಣಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಮುಂದಕ್ಕೆ, ಮಕ್ಕಳ ಆರೋಗ್ಯದ ಜೊತೆಗೆ ಅವರ ಮಾನಸಿಕ ಆತಂಕ, ಭಯ ಇತ್ಯಾದಿಗಳನ್ನು ಗಮನದಲ್ಲಿರಿಸಕೊಂಡು ಜಾಗೃತಿ ಮೂಡಿಸಬೇಕಾದ ಕೆಲಸ ಸರ್ಕಾರದಿಂದ ಪ್ರಾರಂಭವಾಗಬೇಕಿದೆ. ಈ ಅಭೂತಪೂರ್ವ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರದ ಪ್ರಾಥಮಿಕ ಜವಾಬ್ದಾರಿಯೆಂದರೆ, ಸಾಂಕ್ರಾಮಿಕ ರೋಗದಿಂದ ರಕ್ಷಿಸಿಕೊಳ್ಳಲು ಮಕ್ಕಳಿಗೆ ವಿಶೇಷವಾಗಿ ಬಡ ಕುಟುಂಬದ ಮಕ್ಕಳಿಗೆ ಅಗತ್ಯ ನೀರು, ಆಹಾರ, ಪೋಷಣೆ ಮತ್ತು ಸುರಕ್ಷತೆಯನ್ನು ಖಾತರಿಪಡಿಸುವುದರೊಂದಿಗೆ, ಶೈಕ್ಷಣಿಕ ಭದ್ರತೆಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು.

ಮಕ್ಕಳ ಶೈಕ್ಷಣಿಕ ,ಮಾನಸಿಕ ಹಾಗು ನೈತಿಕ ಬೆಂಬಲಕ್ಕೆ ನಿಲ್ಲುವುದು ಮತ್ತು ಸೋಂಕಿನ ಸವಾಲು ಮೀರಿ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆ ಯನ್ನು ವ್ಯತ್ಯಯವಾಗದಂತೆ ಆರಂಭಿಸಲು ಸೂಕ್ತ ವ್ಯವಸ್ಥೆ ಕಲ್ಪಿಸುವುದು ಒಂದು ದೊಡ್ಡ ಸವಾಲು. ಈ ವಿಚಾರದಲ್ಲಿ ಪೋಷಕರ ಮತ್ತು ಸರ್ಕಾರದ ಜವಾಬ್ದಾರಿ ಸಮಾನವಾಗಿದೆ.

One thought on “ಕೋವಿಡ್ – 19 ಪರಿಣಾಮ : ವಿದ್ಯಾರ್ಥಿಗಳ ಶೈಕ್ಷಣಿಕ ಹಾದಿ ಅತಂತ್ರ

  1. ಕೊವಿಡ್ ಪರಿಣಾಮದ ಕುರಿತು ಮಕ್ಕಳ, ಪೋಷಕರ ಹಾಗೂ ಸರಕಾರದ ಜವಾಬ್ದಾರಿಗಳನ್ನು ಸರಿಯಾಗಿ ವಿಶ್ಲೇಷಿಸಿ ಬರೆದದ್ದು ತುಂಬಾ ಚೆನ್ನಾಗಿ ಮೂಡಿ ಬಂದಿದೆ.

    Like

Leave a comment