►ಸಂಪಾದಕೀಯ►’ಉತ್ತರ ಪ್ರದೇಶ ಸರಕಾರವು ತನ್ನ ಅನಿಯಮಿತ ಉದ್ಧಟತನಕ್ಕೆ ಕಡಿವಾಣ ಹಾಕಲಿ’

[ ಸಂತ್ರಸ್ತೆಗೆ ನ್ಯಾಯ ಒದಗಿಸುವಲ್ಲಿ ಯು.ಪಿ ಸರಕಾರವು ಆಶಾದಾಯಕವಾಗಿ ಸಹಕರಿಸಲಿ]

ಕಳೆದ ಹಲವಾರು ದಿನಗಳಿಂದ ಸುದ್ದಿಯಾಗುತ್ತಿರುವ ಹಥರಾಸ್ ಅತ್ಯಾಚಾರ ಪ್ರಕರಣದ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಇದೆ.ಆರೋಪಕ್ಕೆ ಸಂಬಂಧಪಟ್ಟಂತೆ ಹಲವು ಟ್ವಿಸ್ಟ್ ಗಳು ಬೆಳಕಿಗೆ ಬರುತ್ತಾ ಇದೆ.ಏನೇ ಇದ್ದರೂ ಅಲ್ಲಿ ಒಂದು ಅಮಾಯಕ ದಲಿತ ಹೆಣ್ಣು ಮಗಳು ಜೀವ ಕಳೆದುಕೊಂಡಿದ್ದಾಳೆ.20 ರ ಹರೆಯದ ಹೆಣ್ಣು ಮಗಳನ್ನು ಕ್ರೂರವಾಗಿ ಹಲ್ಲೆಗೈದು ಕೊಂದಿದ್ದಾರೆ.ಸೆಪ್ಟೆಂಬರ್ 14 ರಂದು ನಡೆದ ಈ ಕೃತ್ಯ ನಂತರದ ಹಲವು ದಿನಗಳ ನಂತರ ಬೆಳಕಿಗೆ ಬಂದಾಗ ಇಡೀ ದೇಶವೇ ಸ್ತಬ್ಧಗೊಂಡಿತು. ದೇಶದಾದ್ಯಂತ ಆಕ್ರೋಶಗಳು ವ್ಯಕ್ತವಾಯಿತು.

ಇದರಿಂದ ಹಲವು ರಾಜಕೀಯ ಮುಖಂಡರು,ಸಾಮಾಜಿಕ ಹೋರಾಟಗಾರರು,ಮಹಿಳಾ ಪರ ಹೋರಾಟಗಾರರು ಸಂತ್ರಸ್ತೆಯ ಮನೆಯ ನಿವಾಸದತ್ತ ಸಾಂತ್ವನಕ್ಕಾಗಿ ಬೀಡುಬಿಟ್ಟಾಗ ಅಲ್ಲಿನ ಪೊಲೀಸ್ ವ್ಯವಸ್ಥೆಯು ಮಧ್ಯಪ್ರವೇಶಿಸಿ ಸಂಬಂಧಪಟ್ಟವರನ್ನು ಸಂತ್ರಸ್ತೆಯ ಮನೆಗೆ ಧಾವಿಸದಂತೆ ತಡೆಹಿಡಿದಿದ್ದಾರೆ.
ಪೋಲೀಸರ ಈ ಅಹಮಿಕೆಯ ನಡೆಯು ನಿಜಕ್ಕೂ ವಿರೋಧಿಸುವಂಥದ್ದು.
ಮೊದಮೊದಲಿಗೆ ಭೇಟಿ ನೀಡುವವರಿಗೆ ಪ್ರವೇಶ ನಿರಾಕರಿಸಿದ್ದು ತದನಂತರ ಪ್ರವೇಶಕ್ಕೆ ಅವಕಾಶ ಕೊಟ್ಟರೂ ಕೆಲವರ ಮೇಲೆ ಪೋಲೀಸರು ಹಲ್ಲೆ ನಡೆಸಿದ್ದಾರೆ.ಇನ್ನು ಕೆಲವರಿಗೆ ಬಾಯಿ ಮಾತಿನ ಮೂಲಕ ತಡಹಿಡಿದಿದ್ದಾರೆ.ಇನ್ನು ಕೆಲವರ ಮೇಲೆ ಎಫ್ ಐ ಆರ್ ಮತ್ತು ಯು ಎ ಪಿ ಯ ಯಂತಹ ಕಾನೂನನ್ನೂ ಹೇರಿದ್ದಾರೆ.

ಕಾಂಗ್ರೆಸ್ ರಾಷ್ಟ್ರ ನಾಯಕರುಗಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಅವರ ನಿಯೋಗ ಸಂತ್ರಸ್ತೆಯ ಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ ಅಲ್ಲಿನ ಪೋಲೀಸ್ ವ್ಯವಸ್ಥೆಯು ರಾಷ್ಟ್ರೀಯ ಅಧ್ಯಕ್ಷರೆಂದೂ ನೋಡದೆ ರಾಹುಲ್ ಗಾಂಧಿಯವರನ್ನು ನೆಲಕ್ಕುರುಳಿಸಿ ಹಲ್ಲೆಗೈದಿದ್ದಾರೆ.ಇನ್ನು ಕೆಲ ಪೋಲೀಸರು ಪ್ರಿಯಾಂಕ ಗಾಂಧಿಯವರ ಕುರ್ತಾ ಹಿಡಿದು ಹೆಣ್ಣೆಂದೂ ನೋಡದೆ ಅಮಾನುಷವಾಗಿ ವರ್ತಿಸಿದ್ದಾರೆ.ಅದಾಗ್ಯೂ ಅವರಿಗೆ ಮನೆಗೆ ಪ್ರವೇಶ ಲಭಿಸಿತು.ಅದೇ ರೀತಿ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಝಾದ್ ಮನೆಗೆ ಪ್ರವೇಶಿಸುವ ಸಂದರ್ಭದಲ್ಲಿ ತಡೆಹಿಡಿಯಲಾದರೂ,ತದನಂತರ ನಿವಾಸಕ್ಕೆ ಭೇಟಿ ನೀಡಿದರು.ಇದರ ವಿರುದ್ಧ ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ಅಲ್ಲಿನ ಪೋಲಿಸ್ ಸಿಬ್ಬಂದಿಗಳು ಇವರ ಮೇಲೆ ಏನೋ ಕ್ಷುಲ್ಲಕ ಕಾರಣಗಳನ್ನಿಟ್ಟುಕೊಂಡು ಇವರ ಮೇಲೆ ಎಫ್ ಐ ಆರ್ ದಾಖಲಿಸುತ್ತಾರೆ.ಇವರ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ಮಾಡುತ್ತಾರೆ.ಆರ್ ಎಲ್ ಡಿ (ರಾಷ್ಟ್ರೀಯ ಲೋಕ್ ದಳ್) ಉಪಾಧ್ಯಕ್ಷರಾದ ಜಯಂತ್ ಚೌಧರೀ ಮೇಲೆಯೂ ಪೋಲೀಸರು ಐಪಿಸಿ ಸೆ.188 ಹಾಕುವ ಮೂಲಕ ಎಫ್ ಐ ಆರ್ ದಾಖಲಿಸುತ್ತಾರೆ.ಸುಮಾರು 400 ರಷ್ಟು ಹೆಚ್ಚು ಕಾರ್ಯಕರ್ತರಿಗೆ ಲಾಠಿ ಚಾರ್ಜ್ ಮಾಡುತ್ತಾರೆ.

ಈ ಮೊದಲು ಮಾಧ್ಯಮದವರಿಗೆ ಮತ್ತು ಪತ್ರಕರ್ತರಿಗೆ ಸಂತ್ರಸ್ತೆಯ ಮನೆಗೆ ಪ್ರವೇಶ ನಿರಾಕರಿಸಿದ್ದರು.ಇದರ ವಿರುದ್ಧ ದೇಶವ್ಯಾಪ್ತಿಯಲ್ಲಿ ಆಕ್ರೋಶ ವ್ಯಕ್ತವಾಯಿತು.ಹಲವು ಮಾಧ್ಯಮದವರ,ಪತ್ರಕರ್ತರ ಮೇಲೆ ಹೆಣ್ಣೆಂದೂ ನೋಡದೆ ಅಮಾನುಷವಾಗಿ ವರ್ತಿಸಿದ್ದು ,ಹಲ್ಲೆ ಗೈದಿದ್ದು ನಮಗೆ ಸಾಮಾಜಿಕ ಜಾಲತಾಣದಲ್ಲಿ ಕಾಣಲಿಕ್ಕೆ ಸಿಕ್ಕಿದೆ.ಅದಲ್ಲದೆ ಮೊನ್ನೆ ಮೊನ್ನೆಯಷ್ಟೆ ಕೇರಳ ಮೂಲದ ಸಿದ್ದೀಕ್ ಕಪ್ಪನ್ ಎಂಬ ಪತ್ರಕರ್ತ,3 ವಿದ್ಯಾರ್ಥಿ ಸಂಘಟನೆಯೊಂದರ ಹೋರಾಟಗಾರರನ್ನು ಸಂತ್ರಸ್ತೆಯ ಮನೆಗೆ ಧಾವಿಸುವಾಗ ಬಂಧಿಸಿದ್ದಾರೆ.ಮಾತ್ರವಲ್ಲ ಇವರ ಮೇಲೆ ಯು ಎ ಪಿ ಎ ಎಂಬ ಕಾನೂನನ್ನೂ ಹೇರಿದ್ದಾರೆ.

ಒಬ್ಬ ಸಂತ್ರಸ್ತೆಯ ಮನೆಗೆ ಪ್ರವೇಶಿಸುವಾಗ ‘ಇವರ ಮೇಲೆ ನಮಗೆ ಉಗ್ರ ಚಟುವಟಿಕೆಯ ಸಂಶಯ ಇದೆ” ಎಂಬ ಚಿತ್ತದಿಂದ ಇವರನ್ನು ಬಂಧಿಸಿರುವುದು ಎಂದು ಮಾಧ್ಯಮ ವರದಿಯಾಗಿದೆ.ಆದರೆ ಸಾಕ್ಷಿ ರಹಿತವಾದ ಬಂಧನವಾಗಿದೆ ಎಂದು ರಾಷ್ಟ ವ್ಯಾಪ್ತಿಯಲ್ಲಿ ಚರ್ಚೆಯಾಗುತ್ತಿದೆ. ಒಂದು ವೇಳೆ ಸಾಕ್ಷಿರಹಿತ ಬಂಧನವಾದರೆ ಇದು ನಿಜಕ್ಕೂ ಅಪ್ರಜಾಸತ್ತಾತ್ಮಕ.ಇಂತಹ ಸಂದರ್ಭಗಳಲ್ಲಿ ಉತ್ತರ ಪ್ರದೇಶ ಪೋಲೀಸರು ನೈಜ ಕಾರ್ಯದತ್ತ ಪ್ರವೃತ್ತಿಯಾಗುವುದರ ಬದಲು ಸಾಕ್ಷಿರಹಿತವಾಗಿ ಸಂತ್ರಸ್ತೆಯ ನಿವಾಸಕ್ಕೆ ಸಾಂತ್ವನಕ್ಕೆಂದು ಬಂದವರನ್ನು ಬಂಧಿಸುವುದು,ಎಫ್ ಐ ಆರ್ ಹಾಕುವುದು,ಯು ಎ ಪಿ ಯ ಹೇರುವುದು ಮುಂತಾದವುಗಳ ಮೂಲಕ ಅಧಿಕಾರವನ್ನು ದುರುಪಯೋಗಗೊಳಿಸುತ್ತಿದ್ದಾರೆ.ಅದು ಹಿಂದೂ ಮೇಲಾಗಿರಲಿ,ಮುಸಲ್ಮಾನನ ಮೇಲಾಗಿರಲಿ,ಕ್ರೈಸ್ತನ ಮೇಲಾಗಿರಲಿ ಅಥವಾ ಯವುದೇ ಪಕ್ಷದವನ ಮೇಲಾಗಿರಲಿ,ಯಾವುದೇ ಸಂಘಟನೆಯವನ ಮೇಲಾಗಿರಲಿ.ಇಲ್ಲಿ ನಾವು ಮಾನವೀಯತೆಯನ್ನು ಪ್ರದರ್ಶಿಸಬೇಕಾದ ಸಂದರ್ಭ.ಅತ್ಯಾಚಾರವನ್ನು ತೀವ್ರವಾಗಿ ವಿರೋಧಿಸುವ ಸಂದರ್ಭ.ಊಹಾ ನಿರ್ಧಾರದಿಂದ ಸಾಕ್ಷಿರಹಿತವಾಗಿ ಒಬ್ಬನ ಮೇಲೆ ಯು.ಎ.ಪಿ.ಎ ಯಂತಹ ಕಾನೂನು ಹೇರುವುದು ಖಂಡನೀಯ.ಪತ್ರಕರ್ತನ ಬಂಧನದ ವಿರುದ್ಧ ವಿಶೇಷವಾಗಿ ಇಡೀ ಪತ್ರಲೋಕ ಮತ್ತು ಮಾಧ್ಯಮ ಲೋಕ ತೀವ್ರವಾಗಿ ಖಂಡಿಸಬೇಕು.ಅದೇ ರೀತಿ ಅಲ್ಲಿನ ಕೆಲ ಪೋಲೀಸರಂತೂ ಕತ್ತಿಕಟ್ಟಿದ ಹಾಗೆ ವರ್ತಿಸುತ್ತಿದ್ದಾರೆ.ಈಗಾಗಲೇ ಇಂತಹ ಮನಸ್ಥಿತಿಯ ಕೆಲ ಪೋಲೀಸರು ಅಮಾನತುಗೆ ಕಾರಣರಾದರು.ಕೆಲ ಪೋಲೀಸ್ ಸಿಬ್ಬಂದಿಗಳು ತಮಗೆ ಕೊಟ್ಟ ಅಧಿಕಾರವನ್ನು ಸಂಪೂರ್ಣ ದುರುಪಯೋಗಪಡಿಸುತ್ತಿದ್ದಾರೆ.ಇಂತಹ ಕೆಲ ಅರೆ-ಬರೆ ಅಧ್ಯಯನದ ಪೋಲೀಸರಿಂದ ಪ್ರಾಮಾಣಿಕ ಪೋಲೀಸರ ಮೇಲೆ ಇರುವ ನಂಬಿಕೆಯನ್ನು ಜನರು ಕಳೆದುಕೊಳ್ಳುತ್ತಿದ್ದಾರೆ.

2018 ರಲ್ಲಿ 37000 ಅತ್ಯಾಚಾರ ಪ್ರಕರಣ ದಾಖಲೆಗೊಂಡ ಮತ್ತು ದೇಶದಲ್ಲೇ ಮಹಿಳೆಯರಿಗೆ ಸುರಕ್ಷಿತ ರಾಜ್ಯವಲ್ಲ ಎಂಬ ಹೆಗ್ಗಳಿಕೆ ಇರುವ ಈ ಯು.ಪಿ ಯಲ್ಲಿ ನಿರಂತರವಾಗಿ ಇಂತಹ ಬೇಟೆಗಳು ನಡೆಯುತ್ತಲೇ ಇದೆ.
ಹಥರಾಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭೇಟಿ ನೀಡುವ,ವಿರುದ್ಧ ಪ್ರತಿಭಟನೆ ಮಾಡುವ ಹಲವು ಮಂದಿಗಳನ್ನು ಬಂಧಿಸುವ ಮೂಲಕ ಮೊನ್ನೆಯಿಂದೀಚೆಗೆ ಅನಿಯಮಿತ ಉದ್ಧಟತನವನ್ನು ಉತ್ತರ ಪ್ರದೇಶ ಸರಕಾರ ಪ್ರದರ್ಶಿಸುತ್ತಾ ಇದೆ.ಉತ್ತರ ಪ್ರದೇಶ ಸರಕಾರವು
ಇಂತಹ ಇಲ್ಲಸಲ್ಲದ ವಿಚಾರಗಳಿಗೆ ತಲೆಯೊಡ್ಡದೆ ಸಂತ್ರಸ್ತೆಯ ಪರವಾಗಿ ನಿಂತು ಆಶಾದಾಯಕವಾದ ಸಹಕಾರದೊಂದಿಗೆ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವ ಮೂಲಕ ನ್ಯಾಯವನ್ನು ಒದಗಿಸುವಲ್ಲಿ ಕಾರಣಕರ್ತರಾಗಲಿ.

Leave a comment