

ಇಂದು ದೇಶದಲ್ಲಿ ಅತೀ ಹೆಚ್ಚು ಚರ್ಚೆಗೊಳಪಡುವ ವಿಷಯ ಎಂದರೆ, ಕೇಂದ್ರ ಸರ್ಕಾರ ರೈತರ ಆದಾಯ ದ್ವಿಗುಣ ಗೊಳಿಸುವ ಮತ್ತು ಆಹಾರ ಸಮಗ್ರತೆಯ ಕಾರಣ ನೀಡಿ ಜಾರಿಗೆ ತಂದ ಕೃಷಿ ಸುಧಾರಣಾ ಕಾಯ್ದೆ.
ಇದಕ್ಕೆ ದೇಶಾದ್ಯಂತ ಅನೇಕ ಕಡೆಗಳಲ್ಲಿ, ಮುಖ್ಯವಾಗಿ ಪಂಜಾಬ್, ಹರಿಯಾಣದಲ್ಲಿ ರೈತರ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಕೃಷಿ ಕ್ಷೇತ್ರದ ಸುಧಾರಣೆಗಾಗಿ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮೂರು ಬಿಲ್ ಗಳನ್ನು ಮಂಡಿಸಿತು ಮತ್ತು ಜೂನ್ 5 ರಂದು ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಿತ್ತು. ಅವುಗಳೆಂದರೆ, 1) ಕೃಷಿ ಉತ್ಪನ್ನಗಳ ವಾಣಿಜ್ಯ ಮತ್ತು ವ್ಯಾಪಾರ ಮಸೂದೆ (ಉತ್ತೇಜನ ಹಾಗೂ ಸೌಕರ್ಯ), 2) ಬೆಲೆ ಭರವಸೆ & ಕೃಷಿ ಸೇವೆಗಳ ಸುರಕ್ಷತೆ ಮತ್ತು ಸಬಲೀಕರಣ ಮಸೂದೆ ಹಾಗೂ 3) ಅಗತ್ಯ ಸರಕುಗಳ ಬೆಲೆ ಮತ್ತು ಪ್ರಮಾಣವನ್ನು ನಿಯಂತ್ರಿಸಲು ‘ಅಗತ್ಯ ಸರಕುಗಳ ತಿದ್ದುಪಡಿ ಮಸೂದೆ’.
ಹಲವಾರು ರೈತರ , ರಾಜಕೀಯ ಪಕ್ಷಗಳ, ಸಂಘಟನೆಗಳ ವಿರೋಧದ ನಡುವೆಯೂ ಲೋಕಸಭೆ ಈ ಕಾಯ್ದೆಗಳನ್ನು ಅಂಗೀಕರಿಸಿ ಜಾರಿಗೊಳಿಸಿದೆ. ಶಿರೋಮಣೆ ಅಕಾಲಿ ದಳ ನಾಯಕಿ ಮತ್ತು ಪಕ್ಷದ ಏಕೈಕ ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ಅವರು ಮೂರು ಕೃಷಿ ಮಸೂದೆಗಳನ್ನು ‘ರೈತ ವಿರೋಧಿ’ ಎಂದು ಬಣ್ಣಿಸಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಪ್ರತಿಭಟನಾ ನಿರತ ರೈತರಿಗೆ ಬೆಂಬಲ ಸೂಚಿಸಿದ್ದಾರೆ.
ಇನ್ನು ರಾಜ್ಯ ಸಭೆಯಲ್ಲಿ ರೈತರ ಪಾಲಿನ ಮರಣ ಶಾಸನವಾದ ಈ ಮಸೂದೆಗಳ ಅಂಗೀಕಾರದ ಕುರಿತು ನಡೆದ ಕೋಲಾಹಲದ ಪರಿಣಾಮವಾಗಿ ವಿರೋಧ ಪಕ್ಷದ 8 ಸದಸ್ಯರನ್ನು ಅಮಾನತು ಮಾಡಿ, ಧ್ವನಿಮತಗಳಿಂದ ಮಸೂದೆಯನ್ನು ಅಂಗೀಕರಿಸಲಾಯಿತು.
ಹೀಗೆ, ಎರಡೂ ಸದನಗಳಲ್ಲಿಯೂ ಮೊದಲ ಎರಡು ಮಸೂದೆಗಳು ಅಂಗೀಕಾರಗೊಂಡ ಬಳಿಕವೂ ದೇಶಾದ್ಯಂತ ಪ್ರತಿಭಟನೆಯ ಕಾವು ಹೆಚ್ಚುತ್ತಿದೆ. ಅಷ್ಟಕ್ಕೂ ಈ ಮಸೂದೆಯಲ್ಲಿ ಏನಿದೆ?
ಮೊದಲನೇಯದಾಗಿ ಕೃಷಿ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ ಮಸೂದೆಯಲ್ಲಿ, ರೈತರು ವಿಷೇಶವಾಗಿ ಪಂಜಾಬ್ ಹರಿಯಾಣ, ತೆಲಂಗಾಣ, ಆಂದ್ರಪ್ರದೇಶ, ಬಿಹಾರ, ಮೊದಲಾದ ಆಹಾರ ಧಾನ್ಯ ಹೆಚ್ಚಾಗಿ ಉತ್ಪಾದಿಸುವ ರಾಜ್ಯಗಳ ರೈತರು ತಮ್ಮ ಉತ್ಪನ್ನಗಳನ್ನು ಎಪಿಎಂಸಿ ಮತ್ತು ಮಂಡಿಗಳ ಮೂಲಕ ಕನಿಷ್ಠ ಬೆಂಬಲ ಬೆಲೆ (MSP) ನ್ನು ನಿಗದಿಪಡಿಸಿ ಮಾರಾಟ ಮಾಡುತ್ತಿದ್ದರು ಆದರೆ, ಇನ್ನು ಮುಂದೆ ತಮ್ಮ ಉತ್ಪನ್ನಗಳನ್ನು ಎಪಿಎಂಸಿ ಯಲ್ಲೇ ಮಾರಾಟ ಮಾಡಬೇಕೆಂದಿಲ್ಲ, ಮುಕ್ತವಾಗಿ ಎಲ್ಲಿ ಬೇಕಾದರೂ, ಯಾರಿಗೆಬೇಕಾದರೂ ಮಾರಾಟ ಮಾಡಬಹುದು.
ಈ ಮಸೂದೆಯಿಂದಾಗಿ ಅಂತರ್ ರಾಜ್ಯ ವ್ಯಾಪಾರ,ಆನ್ ಲೈನ್ ವ್ಯಾಪಾರ ಮತ್ತು ಎಲೆಕ್ಟ್ರಾನಿಕ್ ಟ್ರೇಡಿಂಗ್ ಗೆ ಅನುಕೂಲಕರವಾಗುತ್ತದೆ. ಮತ್ತು ರೈತರು ಏಜೆಂಟ್ ಗಳ ಮೇಲೆ ಅವಲಂಬಿಸಬೇಕಾಗಿಲ್ಲ. ಇನ್ನು ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಯಾವುದೇ ಲೈಸನ್ಸ್ ಅಗತ್ಯವಿರುವುದಿಲ್ಲ.ಕೇವಲ ಪಾನ್ ಕಾರ್ಡ್ ಉಪಯೋಗಿಸಿ ಯಾರು ಬೇಕಾದರೂ ರೈತರಿಂದ ನೇರವಾಗಿ ಉತ್ಪನ್ನಗಳನ್ನು ಖರೀದಿ ಮಾಡಬಹುದು.
ಈ ಕಾಯ್ದೆಯಿಂದ ಮೇಲ್ನೋಟಕ್ಕೆ ರೈತರಿಗೆ ಅನುಕೂಲವಾಗುವುದಾದರೂ ಏನು ಎಂದು ಕುಲಂಕುಷವಾಗಿ ಅಧ್ಯಯನ ಮಾಡಿದರೆ, ಮುಕ್ತ ಮಾರುಕಟ್ಟೆ ಸೃಷ್ಟಿಯಾದರೆ ರೈತರು ಸರ್ಕಾರದ ಬೆಂಬಲ ಬೆಲೆಯಿಂದ ವಂಚಿತರಾಗುತ್ತಾರೆ. ಅಲ್ಲದೇ ಮಾರುಕಟ್ಟೆಯಲ್ಲಿ ಖಾಸಗಿ ವ್ಯಾಪಾರಿಗಳ ಏಕಸ್ವಾಮ್ಯಕ್ಕೆ ಅವಕಾಶ ಕಲ್ಪಿಸುತ್ತದೆ. ರಾಜ್ಯ ಸರ್ಕಾರಕ್ಕೆ ಆದಾಯವಾಗಿ ಬರುತ್ತಿರುವ ಸೆಸ್ಸ್, ಲೈಸನ್ಸ್ ಫೀಸ್, ಲೆವಿ ಮುಂತಾದವುಗಳು ನಿಂತುಹೋಗುತ್ತದೆ. ವಿಶೇಷವಾಗಿ ಈ ಮಸೂದೆಯಿಂದ ಸರ್ಕಾರ ಎಪಿಎಂಸಿಯ ಮೂಲಕ ಖರೀದಿಸಿದ ಆಹಾರ ಪದಾರ್ಥಗಳು ದೇಶದ ಶೇ.80% ರಷ್ಟು ಬಡವರಿಗೆ ರಿಯಾಯಿತಿ ದರದಲ್ಲಿ ತಲುಪಿಸುವ ವ್ಯವಸ್ಥೆ ಇರುವುದಿಲ್ಲ, ಹೀಗಾಗಿ ಸಾಮಾನ್ಯ ಜನರಿಗೆ ಆಹಾರ ಭದ್ರತೆ ಇಲ್ಲದಂತಾಗುತ್ತದೆ.
ಇನ್ನು ಬೆಲೆ ನಿರ್ದಾರದ ವೇಳೆ ರೈತರಿಗೆ ವಂಚನೆಗಳಾಗುತ್ತವೆ, ಬಹುತೇಕ ಗ್ರಾಮೀಣ ರೈತರಿಗೆ ಎಲೆಕ್ಟ್ರಾನಿಕ್ ವ್ಯಾಪಾರದ ಬಗ್ಗೆ ಮಾಹಿತಿ ಇಲ್ಲ ಎಂಬುವುದು ರೈತ ಮುಖಂಡರ ಆತಂಕ.
ಎರಡನೇಯದಾಗಿ, ಬೆಲೆ ಭರವಸೆ & ಕೃಷಿ ಸೇವೆಗಳ ಮಸೂದೆಯಲ್ಲಿ ರೈತ ಕಾರ್ಪೋರೇಟ್ ಕಂಪನಿಗಳೊಂದಿಗೆ ನಿರ್ದಿಷ್ಟ ಬೆಲೆಯನ್ನು ನಿಗದಿಪಡಿಸಿ, ಮಾರಾಟದ ಒಪ್ಪಂದವನ್ನು ಮಾಡಿಕೊಳ್ಳಬಹುದು.ಅಂದರೆ ಕಾಂಟ್ರಾಕ್ಟ್ ಮೂಲಕ ಕಂಪನಿಗಳು ಖರೀದಿಸುವುದು. ಈ ಮಸೂದೆ ಖಾಸಗಿ ಮತ್ತು ಕಾರ್ಪೋರೇಟ್ ವಲಯ ರೈತರನ್ನು ಶೋಷಣೆ ಮಾಡುವುದಕ್ಕೆ ದಾರಿ ಮಾಡಿಕೊಡುತ್ತದೆ. ಇಲ್ಲಿ ಒಪ್ಪಂದ ಮಾಡಿಕೊಂಡ ಕಂಪನಿಗಳು ರೈತರಿಗೆ ಸೂಕ್ತ ಬೆಲೆಯನ್ನು ನೀಡದೇ ಇದ್ದರೆ, ಅಥವಾ ಮಾರುಕಟ್ಟೆಯಲ್ಲಾಗುವ ಬೆಲೆಯ ಏರಿಳಿತದಿಂದಾಗಿ ರೈತರ ಉತ್ಪನ್ನಗಳನ್ನು ತಿರಸ್ಕರಿಸಿದರೆ ರೈತ ನ್ಯಾಯಾಲಯದ ಮೆಟ್ಟಿಲೇರಬೇಕಾಗುತ್ತದೆ. ಇನ್ನೂ ನಮ್ಮ ದೇಶದಲ್ಲಿ ನ್ಯಾಯ ಹೇಗೆ ಸಿಗಬಹುದು ? ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ…! ಹಾಗಾಗಿ ರೈತರು ಶೋಷಣೆಗೊಳಗಾಗದ ರೀತಿಯ ಮಾನದಂಡಗಳ ಬಗ್ಗೆ ಈ ಮಸೂದೆಯಲ್ಲಿ ಸ್ಪಷ್ಟ ಮಾಹಿತಿಯೂ ಇಲ್ಲ.
ಇನ್ನು ಮೂರನೇಯದ್ದು, ಅಗತ್ಯ ಸರಕುಗಳ ತಿದ್ದುಪಡಿ ಮಸೂದೆ ;
ಇದರಲ್ಲಿ ಕೆಲ ಧಾನ್ಯಗಳು, ದ್ವಿದಳ ಧಾನ್ಯಗಳು, ಎಣ್ಣೆ ಕಾಳುಗಳು, ಅಡುಗೆ ತೈಲ, ಈರುಳ್ಳಿ, ಆಲುಗಡ್ಡೆ ಮುಂತಾದವುಗಳನ್ನು ಅಗತ್ಯ ವಸ್ತುಗಳ ಪಟ್ಟಿಯಿಂದ ಕೈಬಿಡುವ ಯೋಜನೆ ಅಡಕವಾಗಿದೆ.
ಇದರಿಂದಾಗಿ ಆಹಾರ ಪದಾರ್ಥಗಳ ಬೆಲೆ ಏರಿಕೆ ಸಾಧ್ಯವಾಗುತ್ತದೆ ಮತ್ತು ಆಹಾರ ಸುರಕ್ಷತೆಗೆ ಇದು ಧಕ್ಕೆಯನ್ನುಂಟುಮಾಡುತ್ತದೆ. ಖಾಸಗಿ ಕಂಪೆನಿಗಳು ತಮ್ಮಲ್ಲಿರುವ ಹಣಬಲದಿಂದ ಆಹಾರ ಪದಾರ್ಥಗಳನ್ನು ಅಧಿಕ ಪ್ರಮಾಣದಲ್ಲಿ ಖರೀದಿಸಿ, ಅಧಿಕ ಬೆಲೆಗೆ ಮಾರಾಟ ಮಾಡುತ್ತವೆ. ಹೀಗಾಗಿ, ಹಣದುಬ್ಬರದಿಂದ ಸಾಮಾನ್ಯ ಜನರಿಗೆ ಏನು ಸಿಗದ ಪರಿಸ್ಥಿತಿ ಉಂಟಾಗಬಹುದು.
ಅಲ್ಲದೇ, ಅತ್ಯಗತ್ಯ ವಸ್ತುಗಳ ಪಟ್ಟಿಯಿಂದ ಕೈಬಿಡುವ ಪದಾರ್ಥಗಳ ಬೆಲೆಯ ಮೇಲೆ ಸರ್ಕಾರಕ್ಕೆ ನಿಯಂತ್ರಣವಿರುವುದಿಲ್ಲ.
ಹೀಗೆ, ಮೇಲ್ನೋಟಕ್ಕೆ ಈ ಮಸೂದೆಗಳು ರೈತರ ಹಿತಾಸಕ್ತಿ ಕಾಪಾಡುತ್ತದೆಯಾದರೂ ,ಮುಕ್ತ ಮಾರುಕಟ್ಟೆಗೆ & ಬೆಲೆ ನಿರ್ಧಾರಕ್ಕೆ ಬೇಕಾದ ಸೂಕ್ತ ವ್ಯವಸ್ಥೆ ,ಮಾನದಂಡ ರೂಪಿಸದೇ ಜಾರಿಗೊಳಿಸುವುದು ರೈತರನ್ನು ಸಂಕಷ್ಟಕ್ಕೀಡುಮಾಡುತ್ತದೆ ಎಂಬುವುದೇ ಆತಂಕ.
“ರೈತ ದೇಶದ ಬೆನ್ನೆಲುಬು” ಎಂಬುವುದು ಬರೀ ಬಾಯಿ ಮಾತಿನಲ್ಲಿದೆಯೇ, ಹೊರತು ಮಸೂದೆಯಲ್ಲಿರುವ ಅಂಶಗಳು, ಲಾಭಗಳು ಮತ್ತು ಅವುಗಳನ್ನು ಬಳಸಿಕೊಳ್ಳುವುದರ ಕುರಿತು ಸರ್ಕಾರ ರೈತರಿಗೆ ಅರಿವು ಮೂಡಿಸುವ ವ್ಯವಸ್ಥೆಯನ್ನು ಕಲ್ಪಿಸದೆ, ಮಸೂದೆಯನ್ನು ಜಾರಿಗೊಳಿಸುವುದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ.
ಹೆಚ್ಚುತ್ತಿರುವ ಆತ್ಮಹತ್ಯೆ, ಪ್ರವಾಹ, ಮಾರಾಟ ಅವ್ಯವಸ್ಥೆ ಹೀಗೆ ಪ್ರತಿಯೊಂದು ವಿಚಾರಗಳಲ್ಲೂ ಕನಿಷ್ಟವಾಗಿ ಬದುಕು ನಡೆಸಲು ಅತೀವ ಸಂಕಷ್ಟದಲ್ಲಿರುವ ಅಸಂಘಟಿತ ರೈತಾಪಿ ಸಮೂಹವು ವಿಮೋಚನೆ ಪಡೆಯುವುದು ಮುಖ್ಯಾವಗಿರುವ ಪ್ರಸ್ತುತ ದಿನಗಳಲ್ಲಿ ಈ ರೀತಿಯ ಆತಂಕವಾದಿ ಮಸೂದೆಗಳನ್ನು ಜಾರಿಗೊಳಿಸಿದ ಸರ್ಕಾರದ ನಡೆ ಎಷ್ಟು ಸರಿ ?
ಕೃಷಿ ಕ್ಷೇತ್ರದಲ್ಲೂ ಖಾಸಗೀ ಒಡೆತನದ ಮಂಡಿಗಳ ಪ್ರಾಬಲ್ಯವನ್ನು ಸೃಷ್ಠಿಸಿ, ಸುಧಾರಣೆಯ ವ್ಯತಿರಿಕ್ತವಾದ, ರೈತರನ್ನು ಕಾರ್ಪೋರೆಟ್ ಗುಲಾಮರನ್ನಾಗಿಸುವ, ದೇಶದ ಜನರ ಆಹಾರ ಭದ್ರತೆಯನ್ನು ಹೋಗಲಾಡಿಸುವ ಈ ರೀತಿಯ ಮಸೂದೆಯನ್ನು ಪರಿಶೀಲಿಸದೇ ಜಾರಿಗೊಳಿಸಿ, ದೇಶದ ರೂವಾರಿಯಾಗಿರುವ ರೈತರ ಬದುಕನ್ನೇ ಆತಂಕಕ್ಕೆ ಒಳಪಡಿಸಿದ್ದನ್ನು ನಿಜಕ್ಕೂ ಖಂಡಿಸಬೇಕಾಗಿದೆ.
ರೈತರನ್ನು ಗುಲಾಮರನ್ನಾಗಿಸಿದರೆ, ನಾವುಗಳು ಗುಲಾಮರಾದಂತಲ್ವಾ !!!
ಜೈ ಜವಾನ್ ಜೈ ಕಿಸಾನ್…
◼️◼️◼️◼️◼️◼️
✍️ ಸಿದ್ದೀಕ್ ಜಾರಿಗೆಬೈಲು